Dhrushya as looked upto
- Dhrushya
- Jan 6, 2019
- 1 min read

ದೃಶ್ಯ
'ದಕ್ಷ'ನ ಕುಲುಮೆಯಿ೦ದೆದ್ದು ಬಂದ 'ಭಟ್ಟರ ಮಗಳು'!
"ಮುಂಚಿನ ಹಾಗೆ ಜನ ನಾಟಕಗಳಿಗೆ ಬರೋದಿಲ್ಲ ಅಲ್ವಾ, ಪಾಪ ರಂಗಭೂಮಿ ನಶಿಸ್ತಾ ಇದೆ" ಅಂತೆಲ್ಲಾ ಖಾಲಿಪೀಲಿ ಮಾತನಾಡುವ ಮಂದಿಯನ್ನು ಕಂಡಾಗಲೆಲ್ಲ ಮನಸ್ಸಿನಲ್ಲಿ ನಗೆ ಉಕ್ಕಿದರೂ ಅದುಮಿಕೊಂಡು ಸುಮ್ಮನಿ ರುತ್ತೇನೆ! ಕರ್ನಾಟಕದ ತುಂಬೆಲ್ಲಾ ರಂಗಾ೦ದೋಲನ ಹಿಂದೆಂದಿಗಿಂತಲೂ ಹೆಚ್ಚು ಗರಿಗೆದರಿದೆ. ಈಗ ಕನ್ನಡದ ಮಣ್ಣಿಗೆ ರಂಗವೆ೦ಬ ಸಿಂಚನ ಚಿಮ್ಮಿ ಹೊಸ ಘಮಲು ಆಸ್ವಾದಿಸುತ್ತಿದ್ದಾರೆ ಪ್ರಜ್ಞಾವಂತ ಪ್ರೇಕ್ಷ ಕರು. ಹೊಸದನ್ನು ಸೃಷ್ಟಿ ಮಾಡುವುದಕ್ಕೆ, ಹೊಸ ರಂಗ ಪಡೆಯನ್ನು ಸಜ್ಜುಗೊಳಿಸುವ ಕೈಂಕರ್ಯಕ್ಕೆ ಹಠ ತೊಟ್ಟು ನಿಂತವರಲ್ಲಿ ದಾಕ್ಷಾಯಿಣಿ ಭಟ್ ಭರವಸೆಯಂತೆ ಕಾಣಿಸುತ್ತಿದ್ದಾರೆ.
'ದೃಶ್ಯ' ಒಂದೂವರೆ ದಶಕಗಳಲ್ಲಿ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು- ಮಕ್ಕಳಿಗೆ ನಿರಂತರ ರಂಗ ಶಿಬಿರ, ಪ್ರದರ್ಶನ, ರಂಗ ಪರ್ಯಟನೆಗಳ ಮೂಲಕ ನೂರಾರು ಮಂದಿಗೆ ರಂಗದೀಕ್ಷೆ ಕೊಟ್ಟಿದೆ. ರಂಗಭೂಮಿ ವಿವಿಧ ಆಯಾಮಗಳನ್ನು ಪರಿಚಯಿಸುತ್ತಾ ವೃತ್ತಿಯಾಗಿ- ಪ್ರವೃತ್ತಿಯಾಗಿ ರಂಗ ಮನಸ್ಸಿನ ಸೂಕ್ಷ್ಮತೆಯ ಮೂಲಕ ಜಗತ್ತನ್ನು ಅವಲೋಕಿಸುವ ವಿಶಿಷ್ಟ ಗುಣವನ್ನು ದಯಪಾಲಿಸಿದೆ.
ಪ್ರಪಂಚದ ಸರ್ವಶ್ರೇಷ್ಠ ಸಮಾಜ ವಿಜ್ಞಾನ ಅಂತ ನನಗೆ ರಂಗಭೂಮಿ ಅನಿಸಿದ್ದರೇ.. ಅದಕ್ಕೆ ಕಾರಣವೇ ಈ ಹೊಸ ತಲೆಮಾರು! 'ಮೊಬೈಲ್' ಎಂಬ 'ಮಹಾ ರಾಕ್ಷಸ' ಜೊತೆಯಲ್ಲಿ ದ್ದಾಗಲೂ ಬದಿಗಿಟ್ಟು ಸಂಜೆ ನಾಟಕವೆಂಬ 'ಆತ್ಮನುಭೂತಿ'ಗೆ ಶರಣಾಗುವ ಪರಿ ಕಂಡಾಗ!
ಬಣ್ಣ ಹಚ್ಚುವ ಹೆಣ್ಣುಮಕ್ಕಳಿಗೆ ಜಗತ್ತು ಕೊಡುವ ಮಹಾ ಕಾಟವನ್ನು ಧಿಕ್ಕರಿಸಿ, ಸವಾಲುಗಳನ್ನು ಮೆಟ್ಟಿದ 'ದೃಶ್ಯ'ದ ಮೂಲಕ ಅನೇಕರ ಬದುಕಿನಲ್ಲಿ ಅರ್ಥವಂತಿಕೆಯ 'ಅಂಕ'ಗಳನ್ನು ಸೃಷ್ಟಿ ಮಾಡುತ್ತಲೇ ಇರುವ ದಾಕ್ಷಾಯಿಣಿ ಭಟ್ ಅಂಥವರ ಸಂಖ್ಯೆ ಮತ್ತಷ್ಟು ಹೆಚ್ಚಲಿ!
'ದೃಶ್ಯ' ಹೊಸಬರಲ್ಲಿ ಅದೃಶ್ಯವಾಗಿರುವ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಮತ್ತಷ್ಟು ಬೆಳಗಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.
ಮಂಡ್ಯ ರಮೇಶ್
ನಟನ, ಮೈಸೂರು
コメント