ಪ್ರಸಂಗ 5 : "ದೃಶ್ಯ ಎಂಬ ದಿಕ್ಸೂಚಿ."
- Harshavardhan S
- Oct 10, 2020
- 1 min read
Updated: Oct 24, 2020

ಹೆಬ್ಬಾಳದಲ್ಲಿದ್ದ ನನ್ನ ಆಫೀಸಿಗೆ ಉತ್ತರಹಳ್ಳಿಯಿಂದ ಹಲವು ದಾರಿಗಳಿದ್ದವು. ದಿನನಿತ್ಯ ಕೆಲಸಕ್ಕೆ ಹೋಗುವವರಿಗೆ ಹೀಗೆ ದಾರಿ ವಿಷಯದಲ್ಲಿ multiple choice ಇತ್ತೆಂದಾದರೆ, ಯಾವುದಾದರೂ ಒಂದು short cut ಗೆ ರೂಢಿಸಿಕೊಳ್ಳೋದು ವಾಡಿಕೆ. ಆದ್ರೆ ನನಗೆ, ಬಳಸಿ ಬಂದರೂ ಅದು ಯಾಕೋ ಹನುಮಂತ ನಗರದ ಹರಿಹರ ಗುಡ್ಡದ ರಸ್ತೆಯದೇ ಸೆಳವು.
ಹರಿಹರ ಗುಡ್ಡ ಸಮೀಪಿಸುತ್ತಿದ್ದಂತೆ, ನನ್ನ ಕತ್ತು-ಕಣ್ಣುಗಳು ನನ್ನ ಮಾತೇ ಕೇಳದೆ ಒಂದೆರೆಡು ಕ್ಷಣವಾದರೂ ನಮ್ಮ ರಿಹರ್ಸಲ್ place ಕಡೆ ಇಣುಕಿಬಿಡುತ್ತಿದ್ದವು.
ನಾನು ದೃಶ್ಯಕ್ಕೆ ಸೇರುವಾಗ ರಂಗಭೂಮಿಯ ಅ ಆ ಇ ಈ..ಸಹ ತಿಳಿದಿರಲಿಲ್ಲ. ಸಮಯ ಸಾಗಿದಂತೆ ನನ್ನ ಹಾಗು ರಿಹರ್ಸಲ್ ಪ್ಲೇಸ್ ನ ನಡುವೆ ಬಹಳ ಆತ್ಮೀಯತೆ ಉಂಟಾಗಿತ್ತು. ನಿಜಕ್ಕೂ ಆ ರಿಹರ್ಸಲ್ place ನ ವಿನ್ಯಾಸಕ್ಕೂ, ದೃಶ್ಯ ತಂಡದ ವಾಸ್ತವತೆಗೂ ಸಾಮ್ಯತೆ ಇದ್ದಂತೆ ಎಷ್ಟೋ ಬಾರಿ ಎಣಿಸಿದ್ದೇನೆ.
ಅದೊಂದು ಛತ್ರಿಯಾಕಾರದ ಸೂರಿನ ಪ್ರಾಂಗಣ, ದೃಶ್ಯದ ಜಗತ್ತು ಎನಿಸಿದರೆ . ಆ ಸೂರಿನ ಊರುಗೋಲಂತೆ ನಿಂತ ಸದೃಡ ಮಧ್ಯದ ಕಂಬ, ದೃಶ್ಯದ ಆಧಾರ ದಾಕ್ಷಾಯಣಿ ಮೇಡಂ ನಂತೆ ಅನಿಸುತ್ತಿತ್ತು. ಮತ್ತು ಸುತ್ತ ದಿಕ್ಕುಗಳಿಗೆ ನಿಂತ ಕಂಬಗಳು ಬೇರೇ ಬೇರೇ ಹಿನ್ನಲೆಯಿಂದ ಬಂದ ನಮ್ಮನ್ನು ಹೋಲುವಂತಿದ್ದವು. ಆ ಪ್ರಾಂಗಣವನ್ನು ಆವರಿಸಿದ್ದ ಮೆಶ್, ನಮ್ಮ ಜಗತ್ತಿನ ಸಿಹಿ ಶಿಸ್ತಿನಂತೆ ಇತ್ತು.
ನಮ್ಮ ರಿಹರ್ಸಲ್ place ಕೇವಲ ನಾಟಕ ಕಲಿಕೆಯ ಕ್ರಿಯೆಗೆ ಸೀಮಿತವಾಗಿರಲಿಲ್ಲ. ರಂಗಭೂಮಿಯ ಸಾಧನ ಮಾಡಬೇಕಾದರೆ ಅದರದೇ ಆದ ಬದ್ಧತೆಗಳನ್ನು ಅಳವಡಿಸಿಕೊಳ್ಳಬೇಕು. ಆ ಬದ್ಧತೆಗಳನ್ನು ರಿಹರ್ಸಲ್ ಜಾಗದ ಸ್ವಚ್ಛತೆಯನ್ನು ಕಾಪಡುವುದರಿಂದ ಹಿಡಿದು ರಂಗದ ಮೇಲೆ ಪಾತ್ರವಾಗಿ ಅಭಿನಯಿಸುವವರೆಗೂ ಪ್ರತ್ಯಕ್ಷವಾಗೋ ಪರೋಕ್ಷವಾಗೋ ಹಂತ ಹಂತವಾಗಿ ಅರಿತುಕೊಳ್ಳೊ ಹಾಗೆ ಮಾಡುತ್ತದೆ.
ಒಂದು ಸ್ಥಳ... ಶಿಸ್ತು, ಸ್ನೇಹ, ಸಂಬಂಧ, ಪ್ರಾಮಾಣಿಕತೆ, ವಿದ್ಯೆ, ಸಾಮರ್ಥ್ಯ, ಆತ್ಮ ವಿಶ್ವಾಸ, ಆತ್ಮ ಗೌರವ, ಧೈರ್ಯ, ಸಂಘಟಿಸುವಿಕೆ, ಸ್ವಾವಲಂಬನೆ ಹೀಗೆ ಜೀವನದ ಸರ್ವತೋಮುಖ 'ದೃಶ್ಯ ' ವನ್ನು ಕಾಣಿಸಿಕೊಡುವಾಗಾ ...
ಇನ್ನೇನು ಬೇಕು ಆ ಸ್ಥಳ ನಮ್ಮನ್ನು ಅಯಸ್ಕಾಂತದಂತೆ ಎಳೆಯಲು. !?
- ಹರ್ಷವರ್ಧನ್ ಎಸ್

Harshavardhan has been a part of the Dhrushya Family since 2015 and has been contributing actively to the team ever since.
He is currently pursuing Ms in Sweden.
Art by Samruddhi Gowda, Click here to check out her work.
Comments