google788439879b616bdb.html
top of page

ಪ್ರಸಂಗ 1: "ಪೇಯಿಂಗ್ ಗೆಸ್ಟ್ ಪ್ರಯೋಗದಲ್ಲಿ ಅಂಜಲೀಯ ನಡೆ"

Updated: Sep 14, 2020


ದೃಶ್ಯ , ನನ್ನ ಹವ್ಯಾಸಿ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವ ಕನಸಿಗೆ ಅವಕಾಶ ಒದಗಿಸಿದ ವೇದಿಕೆ. ಯಾರಿಗೂ ಗಂಧ ಗಾಳಿಯೂ ತಿಳಿಯದ ಭಾಷೆಯ ಉಚ್ಛಾರಣೆ, ಆದರೂ ಕಲಿಯಬೇಕೆಂಬ ಹುರುಪು, ಬೆಂಗಳೂರು ಪಡ್ಡೆ ಹುಡುಗರಿಗೆ ಕಸರತ್ತು ಮಾಡಿಸಿತ್ತು ಆ ನಾಟಕ. ‘ಪೇಯಿಂಗ್ ಗೆಸ್ಟ್’- ನಾಟಕದ ಹೆಸರು ಇಂಗ್ಲೀಷಿನದ್ದು ಆದ್ರೂ, ಇದ್ದದ್ದು ಉತ್ತರ ಕರ್ನಾಟಕ ಭಾಷೆಯಲ್ಲಿ. ದೊಡ್ಡ ನೆನಪಿನ ಖಜಾನೆ ತೆರೆದುಕೊಳ್ಳುತ್ತೆ, ನಾಟಕದ ಹೆಸರು ಮನಸಿಗೆ ಬರುತ್ತಿದ್ದ ಹಾಗೆ...


ಕಾಲೇಜಿನ ರಜಾದಿನಗಳು, ಆದರೂ ಊರಿಗೆ ಹೋಗಲು ಮನಸ್ಸಿಲ್ಲ, ಕಾಲೇಜಿಗೂ ಇಷ್ಟು ಶಿಸ್ತಿನಿಂದ ಹೋಗ್ತಿದ್ವೋ ಇಲ್ವೋ! ಬೆಳಿಗ್ಗೆ ಎದ್ದು, ತಿಂಡಿ ಮುಗಿಸಿ ಅಭ್ಯಾಸಕ್ಕೆ ಹಾಜರ್!! ಮತ್ತೆ ನನ್ನ ‘ಪೇಯಿಂಗ್ ಗೆಸ್ಟ್’ ಮುಖ ನೋಡುತ್ತಿದುದ್ದು ಸಂಜೆ, ಒಮ್ಮೊಮ್ಮೆ ರಾತ್ರಿ. ಒಟ್ಟಿಗೆ ಕೂತು ನಾಟಕದ ಬಗೆಗಿನ ಚರ್ಚೆ, ಒಂದಷ್ಟು ಜೋಕುಗಳು, ಗಂಭೀರ ಅಭ್ಯಾಸ, ಇದರ ಜೊತೆ ಎಗ್ಗಿಲ್ಲದೆ ಸುರಿಯೋ ಬೆಂಗಳೂರಿನ ಮಳೆ. ದಿನಗಳು ಕಳೆದದ್ದೇ ತಿಳೀತಿರಲಿಲ್ಲ. ತಂಡದಲ್ಲಿ ಆರ್ಥಿಕ ಸಂಕಷ್ಟದ ದಿನಗಳವು, ಒಂದೊಂದು ರೂಪಾಯಿಯೂ ಮೌಲ್ಯ. ಆದರೂ ಪ್ರತಿದಿನ ತಂಡದಿಂದ ಊಟ ತರ್ಸಿ ಎಲ್ಲರೂ ಒಟ್ಟಿಗೆ ಕೂತು, ಹರಟುತ್ತಾ ಹಂಚಿ ತಿನ್ನೋದ್ರಲ್ಲಿ ಏನೋ ಖುಷಿ! ‘ದೃಶ್ಯ’ ಒಂದು ದಿನವೂ ಯಾವುದೇ ಸಣ್ಣ ಖರ್ಚಿಗೂ, ನಾಟಕ ಹಾಗು ಜೀವನದ ಪಾಠ ಕಲಿಸಿದ್ದಕ್ಕೂ ಒಂದು ರೂಪಾಯಿಯೂ ನಮ್ಮಿಂದ ಅಪೇಕ್ಷಿಸಲಿಲ್ಲ.


ಹೀಗೆ ನಡೀತಿದ್ದ ನಮ್ಮ ನಾಟಕದ ತಯಾರಿಯಲ್ಲಿ ನನ್ನದು ಅಂಜಲಿ ಅನ್ನೋ ಪಾತ್ರ. ವಾಸ್ತವಾಗಿ ಆ ಪಾತ್ರ ನಾಟಕದ ಮೊದಲ ಪ್ರೇಕ್ಷಕಿ, ಸಂಭಾಷಣೆಯಾಗಲಿ, ಪಾತ್ರದ ಸ್ವರೂಪವಾಗಲಿ, ನಾಟಕದ ಹಸ್ತಪ್ರತಿಯಲ್ಲಿ ತಿಳಿಸಿಲ್ಲ. ಆದರೆ, ಆ ಪಾತ್ರಕ್ಕೆ ಒಂದು ಸ್ವರೂಪ ಕೊಟ್ಟು, ಅಸ್ತಿತ್ವಕ್ಕೆ ತಂದದ್ದು ತಂಡದ ಹಾಗು ನಾಟಕದ ನಿದೇರ್ಶಕರಾದ ಶ್ರೀಮತಿ ದಾಕ್ಷಾಯಣಿ ಭಟ್ ಮ್ಯಾಮ್. ನನಗೆ ಖುಷಿಯ ವಿಚಾರವೆಂದರೆ, ಆ ಪಾತ್ರದ ಸಂಭಾಷಣೆ ಹಾಗು ನಾಟಕದಲ್ಲಿ ಅದರ ಬರುವಿಕೆಯನ್ನು ನನಗೇ ರೂಪಿಸಲು ಅವಕಾಶಕೊಟ್ಟದ್ದು. ಒಂದು ರೀತಿಯಲ್ಲಿ ನನಗೆ ನೀಡಿದ ಅಭಿವ್ಯಕ್ತಿ ಸ್ವಾತಂತ್ರವದು! ಮಹಾಕೈಂಕರ್ಯವೆಂಬಂತೆ, ನನಗೆ ತಿಳಿದ ಮಟ್ಟಗೆ ಆ ಪಾತ್ರವನ್ನು ಪ್ರಸ್ತುತ ಪಡಿಸಿದೆ. ನಿರ್ದೇಶಕರು ಒಂದೆರಡು ಸಣ್ಣ ಬದಲಾವಣೆಯೊಂದಿಗೆ ಪಾತ್ರವನ್ನು ನಾಟಕದಲ್ಲಿ ಖಾಯಂ ಮಾಡಿದರು. ನನಗಿದ್ದ ರಂಗಭೂಮಿಯೆಡೆಗಿನ ಒಲವನ್ನು ಹೆಚ್ಚಸಿದ ಕ್ಷಣವದು. ಇದುವರೆಗೂ, ಆ ನಾಟಕದ ಯಾವುದೇ ಪ್ರದರ್ಶನದಲ್ಲಿ, ನಾಟಕಕ್ಕೆ ನಟರ ಅಭಾವವಿದ್ದರೂ ಆ ಪಾತ್ರದ ಕೈಬಿಟ್ಟಿಲ್ಲ ಎಂಬುದು ಖುಷಿಯ ಸಂಗತಿ. ಈ ನಾಟಕ ನಿರ್ಮಾಣದ ಪ್ರತಿ ಹಂತದಲ್ಲೂ ಅವಕಾಶ ಸಿಕ್ಕಿದ್ದು ಒಂದು ಭಿನ್ನ ವಿಶೇಷ ವೈಯಕ್ತಿಕ ಅನುಭವ.


Meghana Vasishta,

She has been a part of the Dhrushya Family since 2010 and has been contributing actively to the team ever since.

She is currently employed as an engineer in BESCOM





Art by Samruddhi Gowda, Click here to check out her work.



Comments


Subscribe Form

© 2023 by Dhrushya Rangatanda. 

bottom of page