google788439879b616bdb.html
top of page

ಪ್ರಸಂಗ 2: "ಛಲವೋ..? ಚಟವೋ..!?"

Updated: Oct 4, 2020


ದೃಶ್ಯ ತಂಡವು ಪ್ರಯೋಗಿಸಿದ 'ಹಾನುಶ್' ನಾಟಕದ ಹಾನುಶ್ ಸುಮಾರು ಹದಿನೆಂಟು ವರ್ಷ ಗಡಿಯಾರ ತಯಾರಿಕೆಯಲ್ಲಿ ತೊಡಗಿ ಕೊನೆಗೆ ಯಶಸ್ಸು ಪಡೆಯುತ್ತಾನೆ. ಆ ನಂತರ ನಾಟಕದ ಕಥೆಯು ಆ ಆವಿಷ್ಕಾರದ ನಂತರದ ರಾಜಕೀಯ ಸಾಮಾಜಿಕ ಬೆಳವಣಿಗೆಗಳೊಂದಿಗೆ ಮುಂದೆ ಸಾಗುತ್ತದೆ. ಇಲ್ಲಿ ಆ ಪಾತ್ರವನ್ನು ನನ್ನೊಳಗೆ ಕಟ್ಟಿಕೊಳ್ಳುವ ಸಮಯದಲ್ಲಿ ನಡೆಸಿದ ತಾರ್ಕಿಕ ಆಲೋಚನೆಗಳ ಸಣ್ಣ ಭಾಗವನ್ನು ಪದಗಳನ್ನಾಗಿಸಲು ಪ್ರಯತ್ನಿಸಿದ್ದೇನೆ..


ಯೋಚಿಸಿ.. ಒಬ್ಬ ಮನುಷ್ಯ ತನ್ನ ಯೌವನದ ಹದಿನೆಂಟು ವರ್ಷಗಳನ್ನು ಒಂದು ಯಂತ್ರದ ತಯಾರಿಕೆಯಲ್ಲಿ.. ಅದರ ಅನಿಶ್ಚಿತ ಯಶಸ್ಸಿನಲ್ಲಿ ಕಳೆಯುತ್ತಾನೆ.. ಒಪ್ಪತ್ತು ಊಟಕ್ಕೂ ಗತಿಯಿಲ್ಲದ ಬಡತನ.. ಹೆಂಡತಿಯ ಅಳಲು.. ಮಗಳ ಹರಿದ ಬಟ್ಟೆ.. ಕಣ್ಣೆದುರೇ ಸತ್ತ ಎಳೆಯ ಮಗು.. ಇದ್ಯಾವುದಕ್ಕೂ ತನ್ನನ್ನು ತಾನು ಸಿಕ್ಕಿಸಿಕೊಳ್ಳದೆ ಒಂದು ಯಾಂತ್ರಿಕ ಗಡಿಯಾರದ ಆವಿಷ್ಕಾರದಲ್ಲಿ ಜೀವಮಾನದ ಮೂರನೇ ಒಂದು ಭಾಗ ಕಳೆಯುತ್ತಾನೆ... ಹೀಗಾಗಿ ಅವನು ಕೇವಲ ಒಬ್ಬ ಸಾಮಾನ್ಯ ವಿಜ್ಞಾನಿಯಾಗಿ ಕಾಣದೆ ಒಬ್ಬ ಅಸಾಮಾನ್ಯ ಆದರ್ಶ ನಾಯಕನಾಗಿ ಕಾಣುತ್ತಾನೆ.. ದಾರ್ಶನಿಕನಾಗಿ ಕಾಣುತ್ತಾನೆ. (ಆವಿಷ್ಕಾರದ ನಂತರದ ಕಥೆಯ ಹರಿವು ಕೂಡ ಈ ದೃಷ್ಟಿಕೋನಕ್ಕೆ ಕಾರಣವಿರಬಹುದು) ಹಾಗಾದರೆ ಅವನ ಈ ಸತತ ಅವಿರತ ಪ್ರಯತ್ನಕ್ಕೆ ಕಾರಣಗಳೇನಿರಬಹುದು..?


ಛಲ.. ಹಾನುಶ್ ಒಬ್ಬ ಛಲಗಾರನಿರಬಹುದು. ಹಿಡಿದ ಕೆಲಸ ಪೂರ್ಣಗೊಳಿಸಿಯೇ ತೀರುವ ಹಟಗಾರನಿರಬಹುದು. ಹಾಗಾಗಿ ಅವನಿಗೆ ಸಂಸಾರದ ಎಲ್ಲಾ ಕಷ್ಟಗಳನ್ನೂ ಭರಿಸಿ ನಿಲ್ಲುವ ಶಕ್ತಿಯಿರಬಹುದು. ಆದರೆ… ಕಥೆಯ ಹರಿವಿನಲ್ಲಿ ನಾಟಕಕಾರರು ಒಂದಷ್ಟು ಗುಣಗಳನ್ನು ಹಾನುಶನಿಗೆ ಆರೋಪಿಸುತ್ತಾರೆ. ಆತ ಅಂಜುಬುರುಕ.. ದಾಕ್ಷಿಣ್ಯಪರ.. ಅಂತರ್ಮುಖಿ.. ಅದೆಷ್ಟೋ ಬಾರಿ 'ಇದು ತನ್ನಿಂದಾಗದ ಕೆಲಸ' ಎಂದು ಕೈಚೆಲ್ಲಿ ಕೂತಿದ್ದಾನೆ. ಮನೆಯ ಕಷ್ಟಗಳಿಗೆ ತಾನೇ ಕಾರಣ ಎಂದು ತಿಳಿದು ಹಳಹಳಿಸಿದ್ದಾನೆ.. ಆರ್ಥಿಕ ನೆರವು ಸಿಗದಿದ್ದಾಗ ಭವಿಷ್ಯದ ಬಗ್ಗೆ ಹೆದರಿದ್ದಾನೆ.ಈ ಎಲ್ಲಾ ಗುಣಗಳಿಂದ ಅವನು ತನ್ನೆಲ್ಲಾ ಕಷ್ಟ ಮೀರಿ ನಿಲ್ಲುವ ಆದರ್ಶ ನಾಯಕನಾಗದೇ.. ತೀರಾ ಸಾಮನ್ಯನಾಗುತ್ತನೆ.. ದುರ್ಬಲನಾಗುತ್ತನೆ.. ಹಾಗಾಗಿಯೇ ಅವನಿಗೆ ಪ್ರತೀ ಹೆಜ್ಜೆಯಲ್ಲೂ ಹೆಂಡತಿ ಕಾತ್ಯಾಳ ಪ್ರೀತಿ.. ಮಗಳು ಯಾಂಕಳ ಕನಸು.. ಲೋಹಾರ್, ಎಮಿಲ್ ರ ಬೆಂಬಲ.. ಅಣ್ಣನ ಮಾರ್ಗದರ್ಶನ ತೀರಾ ಅನಿವಾರ್ಯವಾಗುತ್ತವೆ.. ಇವುಗಳಲ್ಲಿ ಯಾವುದಾದರೊಂದು ಕೊರತೆಯಾದರೂ ಹಾನುಶ್ ಯಶ ಕಾಣಾಲಾರ. ಅಲ್ಲಿಗೆ.. ಹಾನುಶ್ ನನ್ನು ನಿರಂತರ ಅಡೆತಡೆಗಳನ್ನು ಸ್ವಪ್ರಯತ್ನದಿಂದ ಮೀರಿ ಬೆಳೆವ ಅಸಾಮಾನ್ಯ ಛಲಗಾರನನ್ನಾಗಿಸಲು ಸ್ವಲ್ಪ ಕಷ್ಟವಾಗುತ್ತದೆ..


ಚಟ..! ಹಾ..! ಹಾನುಶನಿಗೆ ಗಡಿಯಾರ ತಯಾರಿಕೆ ಒಂದು ಚಟವಿರಬಹು.. ಗೀಳು.. ! ಒಂದು ಕ್ಷಣ ಕಾತ್ಯಳ ದುಃಖ ನೋಡಲಾಗದೆ ಇವೆಲ್ಲಾ ಬಿಟ್ಟು ಬೀಗ ತಯಾರಿಕೆಯಲ್ಲಿ ಕೂರುವ ಹಾನುಶ್ ಮತ್ತೊಂದು ಕ್ಷಣ ಅವನಿಗೇ ಅರಿವಿಲ್ಲದಂತೆ ಗಡಿಯಾರದ ಬಳಿ ಹೋಗುತ್ತಾನೆ.. ಅದು ಅವನ ದೌರ್ಬಲ್ಯ.. ಗಡಿಯಾರದ ಗೀಳು ಮತ್ತು ಸಂಸಾರದ ಅವಶ್ಯಕತೆಗಳನ್ನು ಸಮತೋಲನದಿಂದ ನಿಭಾಯಿಸಲಾಗದೆ ಒದ್ದಾಡುತ್ತಾನೆ ಮತ್ತು ಮುಂದೆ ಈ ಗೀಳಿನಿಂದಲೇ! ಅವನು ತನ್ನ ಗಡಿಯಾರದೊಂದಿಗೆ ಒಂದು ಮಾನವೀಯ ಸಂಬಂಧ ಬೆಳೆಸಿಕೊಳ್ಳುತ್ತಾನೆ.. ಮಹಾರಾಜರು ಅವನ ಕಣ್ಣು ತೆಗೆಸಿದ ನಂತರದ ದಿನಗಳಲ್ಲಿ ಗಡಿಯಾರವನ್ನು ಮಾಡಲಾಗದೆ, ನೋಡಲಾಗದೆ ಮನೋವೇದನೆಗೆ ಒಳಗಾಗುತ್ತಾನೆ.. ಜೀವಮಾನದ ಹದಿನೆಂಟು ವರ್ಷ ಸತತ ಪ್ರಯತ್ನದಿಂದ ಗಡಿಯಾರ ತಯಾರಿಸುವ ಒಬ್ಬ ಆದರ್ಶ ವ್ಯಕ್ತಿ.. ಛಲಗಾರ.. ಕಣ್ಣು ಹೋದ ಮಾತ್ರಕ್ಕಾಗಿ ಕೊರಗಿ ಕುಸಿಯಲಾರ.. ಕುಸಿದರೂ ಮತ್ತೆ ಏಳದೇ ಇರಲಾರನಲ್ಲವೇ?


ಈ ಎಲ್ಲಾ ಕಾರಣಕ್ಕಾಗಿ.. ಹಾನುಶನ ಗಡಿಯಾರ ಅವನ ಚಟ.. ಗೀಳು..! ಮತ್ತು ಈ ಎಲ್ಲಾ ಕಾರಣಗಳಿಂದಾಗಿಯೇ ಹಾನುಶ್ ಸಬಲ ಆದರ್ಶ ನಾಯಕನಾಗದೇ.. ದುರ್ಬಲ ಪರಿಪೂರ್ಣ ಪಾತ್ರವಾಗುತ್ತಾನೆ ಅನಿಸುತ್ತದೆ..

- ಮುರಳೀಧರ ಹೊಳ್ಳ



Muralidhara holla has been a part of the Dhrushya family since 2011 and has been contributing extensively to theatre ever since.


When he is not busy working as a senior engineer at TATA Technologies or as a thespian at Dhrushya, you can catch him don his poet's hat on Instagram and Facebook.


Comments


Subscribe Form

© 2023 by Dhrushya Rangatanda. 

bottom of page