ಟರ್ನಿಂಗ್ ಪಾಯಿಂಟ್ ಅಂತಾರಲ್ಲ ಅಲ್ಲಿಗೆ ನನ್ನ ಶೈಕ್ಷಣಿಕ ಗಾಡಿ ಬಂದು ನಿಂತಿತ್ತು. ತುಂಬಾ ಅಲ್ಲದಿದ್ದರೂ ಪಕ್ಕದ ಮನೆಯವರು ಕೇಳಿದಾಗ ನನ್ನ ಪೋಷಕರು ಕಸಿವಿಸಿ ಇಲ್ಲದೆ ಹೇಳಿಕೊಳ್ಳುವಷ್ಟು ಅಂಕವನ್ನು ಪಡೆದಿದ್ದೆ. ಅಲ್ಲಿಗೆ ಗ್ರೀನ್ ಸಿಗ್ನಲ್ ಮುಂದಕ್ಕೆ, ಎಡಕ್ಕೆ, ಬಲಕ್ಕೆ ಮೂರು ದಿಕ್ಕುಗಳಿಗೂ ತೋರಿಸುತ್ತಿತ್ತು. ಸೈನ್ಸ್ ಆಯ್ದುಕೊಂಡರೆ ಸಿಗ್ನಲ್ ದಾಟಿ ಎಡ ಬಲ ಡೀವಿಯೇಶನ್ ತೆಗೆದುಕೊಳ್ಳದೆ ಸೀದಾ ಹೋದ ಲೆಕ್ಕ. ಮುಂದೇನು ಮಾಡ್ತ್ಯಾ ಅಂತ ನನ್ನ ತಂದೆ-ತಾಯಿ ಕೇಳಿದಾಗ ಸೈನ್ಸ್ ತೊಗೋತೀನಿ ಅಂತ ಧೃಡವಾದ ನಿರ್ಧಾರದೊಂದಿಗೆ ಹೇಳಿದ್ದೆ ಏಕೆಂದರೆ ನನ್ನ ನೆಚ್ಚಿನ ಸ್ನೇಹಿತ ಇದನ್ನೇ ಹೇಳಿದ್ದ ತನ್ನ ತಂದೆ-ತಾಯಿಗೆ. ಲಾಂಗ್ ಡ್ರೈವ್ ಹೋಗುವಾಗ ಗೊತ್ತಿರೋರು ಕಂಪನಿಗೆ ಇದ್ದರೆ ಏನೋ ಒಂದು ಧೈರ್ಯವಲ್ಲವೇ? ಪಿಯುಸಿ ನಂತರ ಇಂಜಿನಿಯರಿಂಗ್ ಮಾಡುವುದಕ್ಕೂ ಇದೇ ಕಾರಣವಿರಬಹುದು.
ಆಗ ನನಗೆ ಸುಮಾರು ಇಪ್ಪತ್ತು ವರ್ಷ. ಮೂರನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ನ ಆವರೇಜ್ ಸ್ಟೂಡೆಂಟ್ ನಾನು. ಸಣ್ಣದಾಗಿ ಮನಸ್ಸಲ್ಲೆಲ್ಲೋ ಇಂಜಿನಿಯರ್ ಆಗಿ ಜೀವನ ಕಟ್ಟಿಕೊಳ್ಳುವುದು ಸಾಧ್ಯವಿಲ್ಲ ಅನಿಸೋಕೆ ಶುರು ಆಗಿತ್ತು. ರೋಡು ಸಪಾಟಾಗಿದ್ದರೂ ನನ್ನ ಗಾಡಿ ಆಗಾಗ ಕೈ ಕೊಡ್ತಾಯಿತ್ತು. ಇಷ್ಟು ದಿನ ಅಕ್ಕಪಕ್ಕ ಇದ್ದ ಸ್ನೇಹಿತರ ಗಾಡಿಗಳು ಈಗ ಕೊಂಚ ಮುಂದೆ ಸಾಗಿದ್ದವು. ಸಿಗ್ನಲ್ ದಾಟಿ ಮುಂದೆ ಬಂದುಬಿಟ್ಟಿದ್ದೇನೆ. One way ಬೇರೇ. ಹಿಂದೆ ತಿರುಗಿಸಲು ಅಸಾಧ್ಯ. ಎಡಕ್ಕೆ ಬಲಕ್ಕೆ ಅಲ್ಲೊಂದು-ಇಲ್ಲೊಂದು ಕಾಲ್ದಾರಿಗಳು. ಈ ದಾರಿಗಳಲ್ಲಿ ಹೋದರೆ ಅವು ಎಲ್ಲಿಗೆ ಮುಟ್ಟಿಸುತ್ತವೊ ಅನ್ನೋ ಭಯ. ಆದರೂ ಡ್ರಾಪ್ ಔಟ್ ಅನ್ನಿಸಿಕೊಳ್ಳಲು ಇಷ್ಟ ಇರಲಿಲ್ಲ. ಏಕೆಂದರೆ ನನ್ನ ತಂದೆ ಒಬ್ಬ ಗೋಲ್ಡ್ ಮೆಡಲಿಸ್ಟ್. ಓದಿನಲ್ಲಿ ಆಸಕ್ತಿ ಕಳೆದುಕೊಂಡ ಹುಡುಗನ ತಂದೆ ಗೋಲ್ಡ್ ಮೆಡಲಿಸ್ಟ್ ಆಗಿದ್ದರೆ ಒತ್ತಡ ಸಾಮಾನ್ಯ ವಿದ್ಯಾರ್ಥಿಯಕ್ಕಿಂತ ಹೆಚ್ಚಿರತ್ತೆ.
ಸ್ಕೂಲು ಕಾಲೇಜಿನಲ್ಲಿ ಸಣ್ಣ ಪುಟ್ಟ ನಾಟಕ ಸ್ಕಿಟ್ಟುಗಳನ್ನು ಮಾಡಿದ್ದೆ. ಯಾರೋ ಸ್ಟುಡೆಂಟೋ ಇನ್ಯಾರೋ ಟೀಚರೋ ಚೆನ್ನಾಗ್ ಮಾಡ್ತ್ಯ ಕಣೋ ಅಂತ ಹೇಳಿದ್ದು ಮನಸ್ಸಿನಲ್ಲಿ ಹಾಗೇ ಉಳಿದುಕೊಂಡುಬಿಟ್ಟಿತ್ತು. ಹತ್ತನೇ ಕ್ಲಾಸ್ಸಿನಲ್ಲಿ ರಿಲೀಸ್ ಆಗಿದ್ದ ಮುಂಗಾರು ಮಳೆ ಫಸ್ಟ್ ಪಿಯುಸಿ ಮುಗಿಯುವವರೆಗೂ ಓಡಿತ್ತು. ಕಾಮಿಡಿ ಟೈಮ್ ಗಣೇಶ್ ಗೋಲ್ಡನ್ ಸ್ಟಾರ್ ಆಗಿ ಇಡೀ ರಾಜ್ಯದ struggling actorsಗೆ ಸ್ಫೂರ್ತಿಯಾಗಿದ್ದ. ಸ್ಮಾರ್ಟ್ ಫೋನ್ ಅಲ್ಲಿ ಸೆಲ್ಫಿ ಕ್ಯಾಮೆರಾ ಅಳವಡಿಕೆಯ ಕಾಲವೂ ಅದೇ ಸಮಯದಲ್ಲಿ ಶುರುವಾಗಿ Kodak ಕ್ಯಾಮರಾ ಬೀರೂ ಸೇರ್ಕೊಂಡಿತ್ತು. ಮಂಗನ ಕೈಯಲ್ಲಿ ಮಾಣಿಕ್ಯವೆಂಬಂತೆ ಎಲ್ಲರ ಕೈಯಲ್ಲೂ ಒಂದೊಂದು ಫೋನು ಫೋನಿನೊಳಗೆ ಎರಡೆರಡು ಕ್ಯಾಮೆರಾಗಳು. ರೀಲ್ ವೇಸ್ಟ್ ಆಗತ್ತೆ ಅನ್ನೋ ಚಿಂತೆ ಇಲ್ಲ, ನೆಗೆಟಿವ್ ಕೊಟ್ಟು 4x6 ಫೋಟೋಗಳಿಗೆ ಕಾಯಬೇಕಾದ ತವಕ ಇಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಫೋಟೋಗಳಿಗೆ ಪೋಸ್ ಕೊಡುವಾಗ ನಗಲೇಬೇಕೆಂಬ ಒತ್ತಡ ಇಲ್ಲ. ಕ್ಲಿಕ್ಕಿಸುವುದು - ಚಂದ ಬಂದರೆ ಸೇವ್ - ಇಲ್ಲದಿದ್ದರೆ ಡಿಲೀಟ್. ನನ್ನ ಹತ್ತಿರ ಆಗಿನ್ನೂ ಸ್ಮಾರ್ಟ್ ಫೋನ್ ಇರಲಿಲ್ಲ. ಸ್ನೇಹಿತನ ಫೋನಿನಲ್ಲಿ ಸೆಲ್ಫಿ ತೆಗೆದುಕೊಂಡು ಆ ವಯಸ್ಸಿನವರೆಲ್ಲರೂ ಮಾಡುವ ಹಾಗೆ ನನ್ನ ಮುಖದ ಆಕರ್ಷಣೆಯ ವಿಮರ್ಶೆ ಮಾಡುತ್ತಿದ್ದೆ. ಒಂದು ಆಂಗಲ್ಲಿನಲ್ಲಿ ನೋಡಿದರೆ ಸ್ಫುರದ್ರೂಪಿ. ಇನ್ನೊಂದು ಆಂಗಲ್ ಅಲ್ಲಿ ಕುರೂಪಿ. ನನ್ನ ಸ್ನೇಹಿತನಿಗೆ ಕೇಳಿದೆ "ಹೀರೋ ಆಗಬಹುದಾ ನಾನು?" ದುನಿಯಾ ವಿಜಯ್ಯೇ ಆಗಿದಾನೆ ನೀನ್ ಆಗಕ್ಕಾಗಲ್ವಾ ಅಂದಿದ್ದನು. ಹೌದು ಹೀರೋ ಆಗಕ್ಕೆ ಟ್ಯಾಲೆಂಟ್ ಬೇಕು ಪರಿಶ್ರಮ ಬೇಕು ಲುಕ್ಸ್ ಎಲ್ಲಾ ಸೆಕೆಂಡರಿ ಅನ್ನಿಸಿತ್ತು.
ಮೂರನೇ ವರ್ಷ ಇಂಜಿನಿಯರಿಂಗ್ ಮುಗಿಯುವುದರೊಳಗೆ ನಟನಾಗುವ ಆ ಕನಸು ಚಿಗುರೊಡೆದಿತ್ತು. ಸೀದಾ ಒಂದಿನ ರಂಗ ಶಂಕರಕ್ಕೆ ಹೋದೆ. ಅಲ್ಲಿರೋ ಆ ತಿಂಗಳಿನ ನಾಟಕ ಪ್ರದರ್ಶನಗಳ ಪಟ್ಟಿಯನ್ನು ತೆಗೆದುಕೊಂಡೆ. ಅಲ್ಲಿದ್ದ ಎಲ್ಲಾ ನಾಟಕ ತಂಡಗಳಿಗೂ ಫೋನ್ ಮಾಡಿದೆ. ಒಂದೆರಡು ತಂಡಗಳಲ್ಲಿ back stage ಕೆಲಸ ಮಾಡಿದೆ. ಅರೇ ಇದೇನಿದು ಅಭಿನಯಿಸುವ ತವಕದಿಂದ ಬಂದರೆ ಬರೀ ಬ್ಯಾಕ್ ಸ್ಟೇಜ್ ಕೆಲಸ ಮಾಡಿಸಿಕೊಳ್ತಾರಲ್ಲಾ ಅನ್ನೋ ಬೇಸರವಿತ್ತು. ಆದರೆ ಇದು ಬೇಸರ ಪಡುವ ಕೆಲಸವಲ್ಲ ಪ್ರತಿಯೊಬ್ಬ ನಟನೂ ಬ್ಯಾಕ್ ಸ್ಟೇಜ್ ಕೆಲಸ ಮಾಡಲೇಬೇಕೆಂಬ ಅರಿವು ದೃಶ್ಯ ರಂಗತಂಡ ಸೇರಿದ ಮೇಲೆ ಮೂಡಿತು.
ದೃಶ್ಯ ರಂಗತಂಡವನ್ನು ದೃಶ್ಯ ರಂಗಶಾಲೆ ಎಂದರೆ ಇನ್ನೂ ಸೂಕ್ತ. ಏಕೆಂದರೆ ದೃಶ್ಯದ ಏಕೈಕ ಸ್ತಂಭವಾದ ಡಾ. ದಾಕ್ಷಾಯಣಿ ಭಟ್ ಅವರ ನಡೆ ಬರೀ ನಟರನ್ನು ಗುಡ್ಡೇ ಹಾಕಿ ನಾಟಕವನ್ನು ನಿರ್ದೇಶಿಸುವುದಲ್ಲ. ಸಾಮಾನ್ಯ ಹುಡುಗರನ್ನು ಮೊದಲು ನಟರನ್ನಾಗಿ ಮಾಡಿ ನಂತರ ನಾಟಕವನ್ನು ಜೊತೆಜೊತೆಯಾಗಿ ಕಟ್ಟಿಕೊಂಡು ಹೋಗೋದು ಅವರ ವಿಶೇಷತೆ.
ಜನವರಿ 2013. 18ನೇ ತಾರೀಖ್ ಇರಬಹುದು. ಸುಮಾರು ಸಂಜೆ 5 ಗಂಟೆಗೆ ನನ್ನ ಸ್ಪ್ಲೆಂಡರ್ ಗಾಡಿಯಲ್ಲಿ ಬಸವನಗುಡಿಯ ಮೆಕ್ಡೊನಾಲ್ಡ್ಸ್ ವಿರುದ್ಧ ರಸ್ತೆಯ ಕೊನೆಗೆ ಬಂದಿಳಿದು ಹರಿಹರ ಪಾರ್ಕ್ ಇದೇನಾ ಅಂತ ಕೇಳಿದೆ. ಒಂದು ತಳ್ಳೋ ಗಾಡಿಯಲ್ಲಿ ಭೇಲ್ ಪುರಿ ಮಾಡುತ್ತಿದ್ದ ದಪ್ಪನೆಯ ವ್ಯಕ್ತಿಯೊಬ್ಬ ಹೌದು ಎಂದು ತಲೆಯಾಡಿಸಿದ. ಅದೊಂದು ಗುಡ್ಡದ ಮೇಲಿರೋ ದೇವಸ್ಥಾನ. ಸುತ್ತಾ ಪಾರ್ಕ್. ದೇವಸ್ಥಾನದ ಮುಂದೆ ಒಂದು ಪಾಳುಬಿದ್ದ ಕಲ್ಲಿನ ಕಟ್ಟಡವಿದ್ದು ಈ ಕಟ್ಟಡದ ಪಕ್ಕ ಒಂದು ಪ್ರಾಂಗಣವಿದೆ. ಇದೇ ನಮ್ಮ ಪ್ರಾಕ್ಟೀಸ್ ಪ್ಲೇಸ್. ದೇವಸ್ಥಾನಕ್ಕೆ ಕೆಲವರು ಬಂದರೆ ಬಹಳಷ್ಟು ಮಂದಿ ವಾಕಿಂಗ್ ಮಾಡುವುದಕ್ಕಾಗಿ ಬರ್ತಾರೆ. ಮೇಡಂ ಆಗಲೇ ಬಂದಿದ್ದರು ನನ್ನ ಬಗ್ಗೆ ವಿಚಾರಿಸಿ ಸರಿ ನಾಳೆಯಿಂದ ಸಂಜೆ ಐದೂವರೆಗೆ ಬಂದುಬಿಡು ಎಂದು ಹೇಳುತ್ತಾ ದೃಶ್ಯದ ತೆಪ್ಪದೊಳಗೆ ಕೂರಿಸಿಕೊಂಡರು.
ಮೊದಲ ದಿನ ಪ್ರಾಕ್ಟೀಸ್ ಪ್ಲೇಸ್ ಗೆ ಹೋದಾಗ ಅಲ್ಲೆಲ್ಲ ನನ್ನ ವಯಸ್ಸಿನವರೇ ಇದ್ದದ್ದು ನೋಡಿ ಖುಷಿಪಟ್ಟೆ. ಒಬ್ಬ ಪೊರಕೆಯಿಂದ ಪ್ರಾಂಗಣವನ್ನು ಗುಡಿಸುತ್ತಿದ್ದ. ಓಪನ್ ಸ್ಪೇಸ್ ಆಗಿರುವುದರಿಂದ ಗಾಳಿಗೆ ಧೂಳು ಮತ್ತು ಒಣಗಿದ ಎಲೆಗಳು ಬಂದು ಬೀಳೋದು ನಿತ್ಯದ ಸಂಗತಿಯಾಗಿತ್ತು. ಆತ ಸ್ವಲ್ಪ ಹೊತ್ತು ಗುಡಿಸಿ ಪೊರಕೆಯನ್ನು ಕೆಳಗೆ ಹಾಕಿದ. ತಕ್ಷಣ ಇನ್ನೊಬ್ಬ ಎದ್ದು ಬಂದ. ಆ ಪೊರಕೆಯನ್ನು ತೆಗೆದುಕೊಂಡು ಗುಡಿಸಲು ಶುರುಮಾಡಿದ. ಓ! ನಾನೂ ಗುಡಿಸಬೇಕೇನೋ ನನ್ನ ಸರದಿ ಬಂದಾಗ ಅಂತ ಮನಸ್ಸಿನಲ್ಲೇ ಅಂದುಕೊಂಡೆ. ಮನೆಯಲ್ಲಿ ಒಂದು ದಿನವೂ ಪೊರಕೆಯನ್ನು ಮುಟ್ಟದ ನನಗೆ ಒಂಥರಾ ಸಂದಿಗ್ಧ ಪರಿಸ್ಥಿತಿ. ಇಬ್ಬರು ಮೂರು ಜನ ಗುಡಿಸಿದ ನಂತರ ನಾನೂ ಹೋಗಿ ಸ್ವಲ್ಪ ಹೊತ್ತು ಗುಡಿಸಿ ಪೊರಕೆಯನ್ನು ಇಟ್ಟು ಬಂದು ಕೂತೆ. ಮೇಡಂ ಬರುವುದರೊಳಗೆ ಎಲ್ಲಾ ಸ್ವಚ್ಛ ಮಾಡುವುದು ವಾಡಿಕೆಯಾಗಿತ್ತು. ಹೀಗೆ ಒಂದು ವಾರ ಪ್ರಾಂಗಣವನ್ನು ಗುಡಿಸಿದ ನನಗೆ ಮನಸ್ಸಿನಲ್ಲೆಲ್ಲೋ ಸಣ್ಣದಾಗಿ ಆ ಜಾಗ ಅಲ್ಲಿದ್ದ ಜನ ನನ್ನವರು ಅನಿಸೋಕೆ ಶುರುವಾಯಿತು. ಇದು ರಂಗಭೂಮಿಯ ಮೊದಲನೇ ಪಾಠ ಅಂತ ಆಗ ಗೊತ್ತಾಗಿರಲಿಲ್ಲ.
ಮೊದಲ ಪಾತ್ರ ಅಂತ ಸಿಕ್ಕಿದ್ದು ಒಬ್ಬ ಜೈನ ಯತಿಯದ್ದು 'ಬಸ್ತಿ' ಎನ್ನುವ ನಾಟಕದಲ್ಲಿ. ಈ ಪಾತ್ರವನ್ನು ಮಾಡುವವ ವಯಕ್ತಿಕ ಕಾರಣದಿಂದ ರಿಹರ್ಸಲ್ಗೆ ಬರುವುದಕ್ಕಾಗಿರಲಿಲ್ಲ. ನನಗೆ ಈ ಪಾತ್ರ ಸಿಕ್ಕಿತು. ರೌಂಡ್ ಸರ್ಕಲ್, ಪಾತ್ರ ವಿಮರ್ಶೆ, ತಿಂಗಳುಗಟ್ಟಲೆ ರೀಡಿಂಗ್, ಬ್ಲಾಕಿಂಗ್, ಡೈಲಾಗ್ ಡೆಲಿವರಿ, ವಾಯ್ಸ್ ಎಕ್ಸರ್ಸೈಜ್, ಸೆಟ್ ಕೆಲಸಗಳು, ಪ್ರಾಪರ್ಟಿ ತಯಾರಿಕೆಗಳು ಇವೆಲ್ಲ ನನ್ನ ಕ್ಯಾರೆಕ್ಟರೈಸೇಶನ್ ಅನ್ನು ಕಟ್ಟಿಕೊಳ್ಳುವುದಕ್ಕೆ ನೆರವಾದವು. ಒಂದು ಪ್ರಾಪರ್ಟಿಯನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಪಾತ್ರಕ್ಕೂ ಆ ಪ್ರಾಪರ್ಟಿಗೂ ಒಂದು ಬಾಂಧವ್ಯ ಬೆಳೆಯುತ್ತದೆ. ಅದು ನಾಟಕ ಪ್ರದರ್ಶನದ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಇದೇ ಕಾರಣಕ್ಕಾಗಿ ಎಲ್ಲರೂ ಬ್ಯಾಕ್ ಸ್ಟೇಜ್ ಕೆಲಸವನ್ನು ಮಾಡಲೇಬೇಕೆಂಬ ಅರಿವು ಮೂಡಿತು. ಥೀಯೇಟರ್ ಗೇಮ್ಸ್ ನಟರ ಬಾಂಧವ್ಯ ಹೆಚ್ಚಿಸುತ್ತದೆ ಹಾಗೂ ಗಿವ್ ಅಂಡ್ ಟೇಕ್ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಇದಕ್ಕೆ ಇರಬೇಕು ರಂಗಭೂಮಿ ನನಗೆ ಅತ್ಯುತ್ತಮ ಗೆಳೆಯರನ್ನು ಕೊಟ್ಟಿದ್ದು.
ಇದೇ ಬಸ್ತಿ ಶೋ ಬಾಂಬೆಯಲ್ಲಿ ಮಾಡಲು ಟ್ರೈನ್ನಲ್ಲಿ ಹೋಗಿದ್ದು, ಸೆಟ್ ಪ್ರಾಪರ್ಟಿಗಳನ್ನು ಎಲ್ಲರೂ ಕಷ್ಟಪಟ್ಟು ಇದ್ದ ಬದ್ದ ಜಾಗಗಳಲ್ಲಿ ತುರುಕಿದ್ದು, ಜರ್ನಿಯಲ್ಲಿ ಡೈಲಾಗ್ ರಿಹರ್ಸಲ್ ಮಾಡಿದ್ದು, ವಿಲೇಜ್ ಮಾಫಿಯಾ ಇತ್ಯಾದಿ ಆಟಗಳನ್ನಾಡಿ ಪಕ್ಕದ ಕಂಪಾರ್ಟ್ಮೆಂಟ್ನವರಿಗೆ ತೊಂದರೆ ಕೊಟ್ಟಿದ್ದು ಎಲ್ಲಾ ರಂಗಭೂಮಿ ಕೊಟ್ಟ ಸಿಹಿ ನೆನಪುಗಳು.
ಹೀಗೆ ಒಂದು ವರ್ಷ ಕಳೆಯಿತು. 'ಬಸ್ತಿ'ಯ ನಂತರ 'ಸಮಾನತೆ', 'ಮರುಗಡಲು' ಎಂಬ ನಾಟಕಗಳಲ್ಲಿ ಅಭಿನಯಿಸಿದ್ದೆ. ನನ್ನ ಇಂಜಿನಿಯರಿಂಗ್ ಓದು ಕೂಡ ಮುಗಿದಿತ್ತು. ಚಂದ್ರಶೇಖರ್ ಕಂಬಾರರು ರಚಿಸಿರುವ 'ಚಾಳೇಶ' ಎಂಬ ನಾಟಕವನ್ನು ಮಾಡುವುದಾಗಿ ಮೇಡಂ ಚರ್ಚಿಸಿದರು. ಚಾಳೇಶನ ಪಾತ್ರ ಸುಮಾರು 70 ವರ್ಷದ ಮುದುಕನದ್ದು. "ನೀನು ಮಾಡುತ್ತೀಯಾ?" ಅಂತ ಮೇಡಂ ಕೇಳಿದರು. ಆಗಿನ್ನೂ ನನಗೆ 22-23 ವರ್ಷ. ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದ ನನಗೆ ಇಷ್ಟು ದೊಡ್ಡ ಜವಾಬ್ದಾರಿಯು ಭಯ ಹುಟ್ಟಿಸಿತು. ಇಲ್ಲ ಎಂದು ಹೇಳುವುದರ ಒಳಗೆ "ನೀನು ಮಾಡು ನಿನಗೆ ಆ ಕೆಪ್ಯಾಸಿಟಿ ಇದೆ" ಅಂತ ಮೇಡಂ ಹೇಳಿದ್ದು ಕೇಳಿ ಮನಸ್ಸಿನ ಮೂಲೆಯಲ್ಲೆಲ್ಲೋ ಅಡಗಿ ಕೂತಿದ್ದ ನನ್ನ ಆತ್ಮವಿಶ್ವಾಸವನ್ನು ಬಡಿದೆಬ್ಬಿಸಿದಂತಾಯ್ತು. ನಿರ್ದೇಶಕರು ನಟರನ್ನು ಮತ್ತು ಪಾತ್ರಗಳನ್ನು ಒಗ್ಗೂಡಿಸುತ್ತಾರೆ. ಆದರೆ ಉತ್ತಮ ನಿರ್ದೇಶಕರು ಒಬ್ಬ ನಟನ ಬೌದ್ಧಿಕ ಶಕ್ತಿ ಹಾಗೂ ಆತ್ಮವಿಶ್ವಾಸವನ್ನು ಪ್ರಬಲಗೊಳಿಸುವ ಕ್ರಿಯೆಯೊಂದಿಗೆ ಆತ ಪಾತ್ರವನ್ನು ಕಟ್ಟಿಕೊಳ್ಳುವುದಕ್ಕೆ ನೆರವಾಗುತ್ತಾರೆ.
ಮೊದಲ ಸೀನ್ನಲ್ಲಿ ಎಂಟ್ರಿ ಕೊಟ್ಟು ನಾಟಕದ ಮೊದಲ ಡೈಲಾಗ್ ಹೇಳುವ ಚಾಳೇಶ ಕೊನೆಯ ಸೀನಿನ ಕೊನೆಯ ಡೈಲಾಗ್ ಹೇಳಿಯೇ ವಾಪಸ್ ಗ್ರೀನ್ ರೂಮಿಗೆ ಬರಬೇಕು ಅಂತ ಕಂಬಾರರು ನಿಶ್ಚಯಿಸಿಬಿಟ್ಟಿದ್ದರು. ಅಲ್ಲಿಗೆ ನಾನು ಒಂದುವರೆ ತಾಸು ಸ್ಟೇಜ್ ಮೇಲೇ ಇರಬೇಕು, ಡೈಲಾಗ್-ಗಿಲಾಗ್ ಮರ್ತ್ಥೋದ್ರೆ ಏನಪ್ಪಾ ಮಾಡೋದು ಅನ್ನೋ ದಿಗಿಲು ಹುಟ್ಟಿತ್ತು. ಆದರೆ ಏನೇ ಆದರೂ ಚನ್ನಾಗಿ ಮಾಡ್ತೀನಿ ಅನ್ನೋ ಕಾನ್ಫಿಡೆನ್ಸ್ ಆ ದಿಗಿಲ್ಲನು ಕೊಂಚ ಮರೆಮಾಚಿತ್ತು. ಚಾಳೇಶನ ಕ್ಯಾರೆಕ್ಟರ್ ಒಳಗೆ ಇಳಿಯುವ ತಯಾರಿ ಆರಂಭವಾಯಿತು. ಮುದುಕರು ಹೇಗೆ ನಡೆದಾಡುತ್ತಾರೆ ಅಂತ ಪಾರ್ಕಲ್ಲಿ ಕೂತು ಅಬ್ಸರ್ವ್ ಮಾಡಿದ್ದು, ನಂತರ ಅದನ್ನೇ ಅನುಕರಿಸುವುದಕ್ಕೆ ಹೋದಾಗ ಮೇಡಂ "ನೀನು ಮುದುಕನ ಹಾಗೆ ನಡೆಯುತ್ತಿಲ್ಲ, ಮೂರುದಿನ ಲಂಡನ್ನಿಗೆ ಹೋಗದೆ ಹೊಟ್ಟೆ ಕೆಡಿಸಿಕೊಂಡು ಕಾನ್ಸ್ಟಿಪೇಶನ್ ಇಂದ ಒದ್ದಾಡುತ್ತಿರುವ ಹಾಗೆ ನಡೆಯುತ್ತಿದ್ದೀಯ" ಅಂತ ಬೈದಿದ್ದು, ನಂತರ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಎಲ್ಲಾ ನೆನೆಸಿಕೊಂಡರೆ ಈಗಲೂ ನಗು ಬರತ್ತೆ. ಅಂತೂ ಶೋ ಫಿಕ್ಸ್ ಆಯ್ತು. ಹೌಸ್ ಫುಲ್ ಆಗಿ ಒಳ್ಳೆ ಪ್ರತಿಕ್ರಿಯೆ ಬಂತು. ನೇರವಾಗಿ ಚೆನ್ನಾಗಿ ಮಾಡಿದ್ದೀಯ ಅಂತ ಮೇಡಂ ಹೇಳದಿದ್ದರೂ ಅವರ ಮುಖಭಾವ ದೃಶ್ಯದ ಮರ್ಯಾದೆ ಉಳಿಸಿದ್ದೀಯ ಅಂತಿತ್ತು. ಶೋ ನಿಜವಾಗ್ಲೂ ಚೆನ್ನಾಗ್ ಆದರೆ ಯಾರ ಅಭಿಪ್ರಾಯ ಕೇಳುವ ಸಂಗತಿ ಬರಲ್ಲ. ನಮ್ಮ ಮನಸ್ಸೇ ಅದಕ್ಕೆ ಬೆಸ್ಟ್ ಕ್ರಿಟಿಕ್ ಅನ್ನೋದು ತಿಳಿಯಿತು.
ನಾನು ಅವತ್ತು ಅತ್ಯದ್ಭುತ ನಟನೆಯನ್ನೇನು ಮಾಡಿರಲಿಲ್ಲ ಅನ್ನೋದು ನನಗೂ ಗೊತ್ತಿತ್ತು. ಆದರೆ ಅಂದು ನಾನು ಗೆದ್ದಿದ್ದೆ. ನನ್ನ ತಂದೆ-ತಾಯಿ ಖುಷಿಪಟ್ಟಿದ್ದರು. ಆ ಶೋ ನನ್ನೊಳಗೊಬ್ಬ ಉತ್ತಮ ನಟನಿದ್ದಾನೆ ಅಂತ ಕೂಗಿ ಹೇಳಿತ್ತು. ಒಬ್ಬ heroಗೂ ಒಬ್ಬ starಗೂ ಒಬ್ಬ actorಗೂ ಇರೋ ವ್ಯತ್ಯಾಸ ಕಲಿಸಿಕೊಟ್ಟಿತ್ತು. ಏನಾದರೂ ಸಾಧಿಸಿದರೆ ಇದೇ ಫೀಲ್ಡ್ನಲ್ಲಿ ಸಾಧಿಸಬೇಕೆಂಬ ಛಲ ಹುಟ್ಟುಹಾಕಿತು. ಶೈಕ್ಷಣಿಕ ಜೀವನದ ಟರ್ನಿಂಗ್ ಪಾಯಿಂಟ್ ಅಲ್ಲಿ ಸ್ನೇಹಿತರ ಗಾಡಿಯನ್ನು ಹಿಂಬಾಲಿಸಿದೆ. ಆದರೆ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಅಲ್ಲಿ ಯಾರ ಗಾಡಿಯನ್ನೂ ಹಿಂಬಾಲಿಸದೆ ಮನಸ್ಸಿನ ಇಚ್ಛೆ ಎಂಬ ರಥವನ್ನು ಚಲಿಸುತ್ತಿದ್ದೇನೆ.
Nishchay Kadur is currently working as an Episode director for the serial "Mithuna Rashi" and "Shaantam Paapam". He has also acted in few Kannada TV Serials and Short Movies.
And has been an active part of Team Dhrushya since 2013.
Comments