google788439879b616bdb.html
top of page

ಪ್ರಸಂಗ 13: "ನನ್ನ ಪ್ರಯಾಣದ ಹೆಜ್ಜೆ ಗುರುತು".

ಹೌದು ನಾನು ಒಬ್ಬ ದೃಶ್ಯ ರಂಗತಂಡದ ಹುಡುಗ ಅಂತ ಹೇಳೋದಕ್ಕೆ ಖುಷಿ ಇದೆ. ಕಳೆದ 2018 ರಲ್ಲಿ ನನ್ನ ಹಾಗೂ ದೃಶ್ಯ ತಂಡದ ಭೇಟಿಯಾಯಿತು.

ನನಗೆ ನಟನಾಗಬೇಕೆಂಬ ಆಸೆ. ಆ ಆಸೆಯ ಬೆನ್ನು ಹತ್ತುವಿಕೆಯ ಹಾದಿಯಲ್ಲಿ ಗೊತ್ತಿಲ್ಲದೆಯೋ, ಗೊತ್ತಿದ್ದೋ ಮೈಸೂರಿನ ಒಂದು ಒಳ್ಳೆಯ ರಂಗತಂಡದಲ್ಲಿ 1 ವರ್ಷ ರಂಗಭೂಮಿ ಕಲಿಕೆಯನ್ನ ಮುಗಿಸಿದೆ. ನಂತರ ಮುಂದೇನು ಎನ್ನುವ ಹುಡುಕಾಟದಲ್ಲಿ ಬೆಂಗಳೂರಿಗೆ ಬಂದು ಸಿನಿಮಾ, ಸೀರಿಯಲ್ ಅಂತ ಅವಕಾಶಗಳನ್ನು ಹುಡುಕಿ ಹೊರಟ ನನಗೆ ಒಂದು ಸೀರಿಯಲ್ ನಲ್ಲಿ ಡೈರೆಕ್ಷನ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಸಿಕ್ತು. ನಂತರ ಅಲ್ಲಿ ಕೆಲಸ ಮಾಡುವಾಗ ನಾನು ಬಂದದ್ದು ನಟನಾಗಲು ಆದರೆ ಮಾಡುತ್ತಿರುವ ಕೆಲಸ ಬೇರೆಯೇ ಎಂದು ಒಂದು ದಿನ ಹುಚ್ಚೆದ್ದು ಆ ಕೆಲಸವನ್ನು ಬಿಟ್ಟು ಮುಂದೇನು ಎಂದು ಒಂದು ದೇವಸ್ಥಾನದ ಮೆಟ್ಟಿಲ ಮೇಲೆ ಕೂತು ಯೋಚಿಸುತ್ತಿದ್ದೆ.

ಆಗ ನನ್ನ ಗೆಳೆಯ ಇದೆ ದೃಶ್ಯ ತಂಡದ ಸದಸ್ಯನಾಗಿದ್ದ. ಅವನು call ಮಾಡಿ “ಒಂದು ನಾಟಕ ಇದೆ ಹಾನೂಷ್ ಅಂತ ಅದರಲ್ಲಿ ಒಂದು ಪಾತ್ರ ಮಾಡಬೇಕು ಅದೂ ರಿಹರ್ಸಲ್ ಕೇವಲ 10 ದಿನ ಇದೆ ಮಾಡ್ತೀಯ “ ಎಂದ.

ಇದನ್ನ ಕೇಳಿದ ನನಗೆ ನಿರ್ಧರಿಸಲು ನಿಜಕ್ಕೂ 30 ನಿಮಿಷ ಬೇಕಾಯ್ತು. ಏಕೆಂದರೆ ನಾನು ನಾಟಕದವನೇ ಆದರೂ 1 ವರ್ಷ ಸಿನಿಮಾ, ಸೀರಿಯಲ್ ಅಂತ ಓಡಾಡಿದವನಿಗೆ ಮತ್ತೆ ನಾಟಕದಲ್ಲಿ ಬಣ್ಣ ಹಚ್ಚಲು ನಿಜಕ್ಕೂ ಒಂದು ರೀತಿಯ ಭಯ ಆಯ್ತು. ದೃಶ್ಯ ಅಂತ ರಂಗತಂಡ ಇದೆ ಅಂತ ಕೇಳಿದ್ದೆ ಆದ್ರೆ ಆ ತಂಡ ಹೇಗಿದೆ? ಆ ತಂಡದ captain ಯಾರು? ಅವರ ನಾಟಕ ಕಟ್ಟುವಿಕೆ ಹೇಗಿರುತ್ತೆ? ನಾನು ಹೋಗಿ 10 ದಿನದಲ್ಲಿ ಪಾತ್ರವನ್ನು ಕಟ್ಟುತ್ತೀನಾ? ನನ್ನನ್ನ ಆ ತಂಡದೊಂದಿಗೆ ಹೊಂದಿಸಿಕೊಳ್ಳುತ್ತೇನ? ಅಥವಾ ಮಧ್ಯದಲ್ಲಿ ಬಿಟ್ಟು ಬರ್ತೀನಾ? ನಾನು ಆ ತಂಡದ ಸದಸ್ಯರ ಜೊತೆ 10 ದಿನದಲ್ಲಿ ಹೇಗೆ ತಾನೆ ಬೆರೆತು ನಾಟಕ ಮಾಡಬಲ್ಲೆ ಎಂದು ನನ್ನೊಳಗೆ ಚರ್ಚೆಗಳು ಶುರುವಾದವು. ಕೊನೆಗೆ ಧೈರ್ಯ ಮಾಡಿ ಬರ್ತೀನಿ ಅಂತ ಹೇಳಿ ಹೋದೆ.

ಆಗ ದೃಶ್ಯ ತಂಡದ ನಿರ್ಮಾತೃ, captain, ಅವರ ಮುಂದೆ ನಿಂತೆ ಅವರೇ… ದಾಕ್ಷಯಿಣಿ ಭಟ್. ಅವರು ಹೇಳಿದ್ರು ‘ನೋಡಿ, ಹಾನೂಷ್ ಅಂತ ನಾಟಕ, ಅದರಲ್ಲಿ ಜಾನ್ ಅಂತ ಪಾತ್ರ, ಸ್ಕ್ರಿಪ್ಟ್ ತಗೊಳಿ ರಿಹರ್ಸಲ್ ಮಾಡ್ಕೊಳ್ಳಿ ಅಂದ್ರು’.

ನನಗೆ, ಇವ್ರೇನು script ಕೊಟ್ಟು ಮಾಡು ಅಂತ ಹೇಳಿದ್ರು ಅದ್ರು ಬಗ್ಗೆ ಏನು ಹೇಳಲೇ ಇಲ್ವಲ್ಲ ಅನ್ನುಸ್ತು. ಯಾಕಂದ್ರೆ ಅಲ್ಲೀ ತನಕ ನಾನು ಮಾಡಿದ್ದೆಲ್ಲ ಡೈರೆಕ್ಟರ್ ಹೇಳಿದ್ದನ್ನಷ್ಟೇ. ನನ್ನ ಸ್ವಂತಿಕೆಯದ್ದನ್ನಲ್ಲ ಆ ಕಾರಣಕ್ಕೆ ನನಗೆ ಹಾಗನ್ನಿಸಿತು.

ಆದರೆ ರಿಹರ್ಸಲ್ ಮಾಡ್ತಾ ಮಾಡ್ತಾ ನನಗಿದ್ದ ಭಯ ಹೋಗಿತ್ತು. ನಾನು ಆ ತಂಡದವನಾಗಿದ್ದೆ. ಪಾತ್ರದ ಪರಿಚಯವು ಆಯ್ತು. ನಿಜ ಹೇಳ್ತಿನಿ ಆ 10 ದಿನ ನಾನು ಸರಿಯಾಗಿ ನಿದ್ದೆ ಮಾಡಿಲ್ಲ. ನನಗಿದ್ದದ್ದು ಒಂದೇ ಪಾತ್ರ ಚೆನ್ನಾಗಿ ಕಟ್ಟಿ ಮೇಡಂ ಕೈಯಲ್ಲಿ Good ಅನ್ನುಸ್ಕೊಬೇಕು ಅನ್ನೋ ಹಟ. ಮೇಡಂ ಬ್ಲಾಕಿಂಗ್ ಮಾಡುವಾಗ ಹೇಳಿಕೊಟ್ಟಿದ್ದೆಲ್ಲಾ ಸರಿಯಾಗಿ ತಲೆಗೆ ಹೋಗುತ್ತಿತ್ತು. ನಾಟಕವು ಆಯಿತು. ಕೊನೆಗೂ ನಾನು ಅಂದುಕೊಂಡ ಹಾಗೆ ಮೇಡಂ ಖುಷಿ ಆಗಿ ಹೇಳಿದ ಮಾತನ್ನು ನಾನು ಇವತ್ತಿಗೂ ನೆನೆಯುತ್ತೇನೆ.

ನಿಮ್ಮ ಶಿಸ್ತು ಚೆನ್ನಾಗಿದೆ ನನಗೆ ಇಷ್ಟ ಆಯ್ತು. ಹಾಗೆ ನಿಮ್ಮ ಧ್ವನಿ ಚೆನ್ನಾಗಿದೆ ಅದನ್ನು ಬಳಸಿಕೊಳ್ಳಿ. ನೀವು ಹೀಗೆಯೇ ಶಿಸ್ತಿನಿಂದ ಈ journey ಯಲ್ಲಿ ಮುಂದುವರೆದರೆ ನಿಮಗೆ future ಇದೆ. ಒಳ್ಳೆಯದಾಗಲಿ ಹೋಗಿ ಬನ್ನಿ ಅಂದ್ರು.

ಹೌದು ನನಗೆ ಗೊತ್ತಿಲ್ಲದೆ ಆ 10 ದಿನದಲ್ಲಿ ನನಗೆ ದೃಶ್ಯ ತಂಡದಿಂದ ಆ ಸ್ಟೇಜ್ ನಲ್ಲಿ ಸಿಕ್ಕಿದ್ದು ನನ್ನದೇ ಧ್ವನಿ. ಅಲ್ಲಿಯ ತನಕ ನನ್ನ ಧ್ವನಿಯ ತಾಕತ್ತು ಅಷ್ಟಿದೆ ಎಂದು ಗೊತ್ತಿರಲಿಲ್ಲ. ಹಾಗೆ ಅಲ್ಲಿನ ಬೇರೆ ಸದಸ್ಯರು ಸಹ ನಿನ್ನ ಧ್ವನಿ ಚೆನ್ನಾಗಿದೆ ಅಂತ ಪ್ರತಿ ಸಾರಿ ಹೇಳಿ ನಾನು ಇನ್ನೂ ಧ್ವನಿಯ ಬಗ್ಗೆ Focus ಮಾಡುವ ಹಾಗೆ ಆ ತಂಡ ಮಾಡಿತ್ತು.

ಆ ನಂತರ ನನ್ನ voice ಬಗ್ಗೆ ಇನ್ನೂ ಕೆಲಸ ಮಾಡ್ಬೇಕು ಅಂತ ಅನ್ಕೊಂಡೆ. ಮೊದಲೇ ಡಬ್ಬಿಂಗ್ ಮಾಡ್ತಿದ್ದ ನನಗೆ ಆ 10 ದಿನದ energy ಬೇರೆಯೇ effort ಹಾಕುವ ಹಾಗೆ ಮಾಡಿ, ಇವತ್ತಿಗೂ Dubbing Industry ಯಲ್ಲಿ ನನ್ನದೇ ಆದ ಪಾತ್ರಗಳಿಗೆ ಜೀವ ತುಂಬುತ್ತಿದ್ದೇನೆ. Thanks to ದೃಶ್ಯ.

“ನಟನಾಗಬೇಕು ಎಂದು ಕನಸು ಕಂಡ ನನಗೆ ಆ 10 ದಿನ ನಟನಿಗೆ ನಟನ ಹಸಿವುಗಳಲ್ಲಿ ಒಂದಾದ ಧ್ವನಿಯ ಬಗ್ಗೆ ಅರಿವು ಮೂಡಿಸಿದ ನೆಲ”.

- ನಿಶ್ಚಿತ್ ಗೌಡ


Nischith Gowda Thakeri joined Dhrushya in the year 2018. He has acted in Kannada TV serials and Short movies. He is also a voice-over artist.

留言


Subscribe Form

© 2023 by Dhrushya Rangatanda. 

bottom of page