ಪ್ರಸಂಗ 8: "ಅನುಭವಗಳ ಸಂಚಿಯೊಂದಿಗಿನ ಪಯಣ."
- Rachana Hegde
- Oct 31, 2020
- 2 min read

ಊರು ಬಿಟ್ಟು ಊರಿಗೆ ಬಂದಾಗ ನನ್ನಲ್ಲಿ ಏನೋ ಕಳೆದುಕೊಂಡ ಭಾವ. ಆ ಭಾವನೆಗಳಿಗೆಲ್ಲಾ ರಂಗು ತುಂಬಿದ್ದು ದೃಶ್ಯ. ಕಾಲೇಜಿನಲ್ಲಿ ತರಗತಿಗಳನ್ನು ಮುಗಿಸಿಕೊಂಡು ರಿಹರ್ಸಲ್ಗೆ ಬರುತ್ತಿದ್ದೆ.ಸಮಯ ಪರಿಪಾಲನೆಗೆ ತುಂಬಾ ಮಹತ್ವ ಕೊಡುತ್ತಿದ್ದರು ಮಾಮ್. ಎಷ್ಟೋ ದಿವಸ ಕಾಲೇಜಿನಲ್ಲಿ ಲ್ಯಾಬ್ ಮುಗಿಸಿ ರಿಹರ್ಸಲ್ ಸ್ಥಳಕ್ಕೆ ಬರೋಕೆ ತಡವಾಗಿ ಬಿಡ್ತಿತ್ತು. ಆಗೆಲ್ಲಾ ಎಷ್ಟೊಂದು ಸಾರಿ ಮಾಮ್ ಹತ್ರ ಬೈಸಿಕೊಂಡಿದ್ದು ಉಂಟು. ಮನೆಯಿಂದ ಕಾಲೇಜ್,ಕಾಲೇಜ್ ಇಂದ ರಿಹರ್ಸಲ್ ಮತ್ತೆ ಅಲ್ಲಿಂದ ಮನೆ.ಹೀಗೆ ಚಕ್ರ ಉರುಳಿದಂತೆ ದಿನಗಳು ಕಳಯುತ್ತಿದ್ದವು. ದೃಶ್ಯದ ಆರಂಭವಾಗಿ ಹತ್ತು ವರ್ಷಗಳಾಗಿತ್ತು. "ದಶಾರ್ಣವ"ದ ಸಂಭ್ರಮ ಎಲ್ಲೆಲ್ಲೂ ತುಂಬಿತ್ತು. ಎಲ್ಲರಲ್ಲೂ ಅದೆಂತದೋ ಹೊಸ ಉತ್ಸಾಹ ಮನೆ ಮಾಡಿತ್ತು, ಇದೊಂಥರಾ ಹಬ್ಬವೇ ಆಗಿತ್ತು ನಮಗೆಲ್ಲ. ಎಲ್ಲರೂ ಸೇರಿ ಕೆಲಸಗಳನ್ನು ಹಂಚಿಕೊಂಡು ಅದರ ತಯಾರಿಯಲ್ಲಿ ಮುಳುಗಿದ್ದೆವು.ಅಂತು ಆ ದಿನ ಬಂದೆ ಬಿಟ್ಟಿತ್ತು.ಆ ಮೂರು ದಿನಗಳಲ್ಲಿ ಕೆ.ಎಚ್. ಕಲಾಸೌಧವನ್ನು ನಾವೇ ಸ್ವತಃ ತಯಾರಿಸಿದ್ದ ಕ್ರಾಫ್ಟ್ಗಳಿಂದ ಪೂರ್ತಿ ಅಲಂಕರಿಸಿಬಿಟ್ಟಿದ್ದೆವು. ಎಂಟ್ರಿ ಆಗುತ್ತಿದ್ದಂತೆ ಬಲಬದಿಯಲ್ಲಿ ಹಂಪಿಯ ರಥ ಎಲ್ಲರನ್ನೂ ಸ್ವಾಗತಿ ಸುತ್ತಿತ್ತು.ಹಾಗೆ ಎಡಬದಿಯಲ್ಲಿ ಚಿತ್ರಗಳ ಸರಮಾಲೆಯ ಜೊತೆ ಜೊತೆಗೆ ಬಣ್ಣ ಬಣ್ಣದ, ಟಿಶ್ಯೂ ಪೇಪರ್ ಇಂದ ತಯಾರಿಸಿದ ಹೂಗಳು ಕೈ ಬೀಸಿ ಕರೆಯುತ್ತಿತ್ತು. ಮೂರು ದಿನಗಳು ಹೇಗೆ ಕಳೆದವೂ ತಿಳಿಯಲಿಲ್ಲ.ಎಲ್ಲರಲ್ಲೂ ಏನೋ ಒಂದು ಸಾಧಿಸಿದ ಖುಷಿಯಿತ್ತು.
ಆಗ ನನಗನಿಸಿದ್ದು ಎಷ್ಟು ಬೇಗ ಎಲ್ಲವೂ ಮುಗಿದು ಹೋಯಿತೇ ಅನ್ನೋದು..... ಅದಾದ ಕೆಲವು ತಿಂಗಳುಗಳ ನಂತರ ಮಾಮ್ ಬಂದು ಉಡುಪಿಯ ಎಮ್.ಜಿ.ಎಮ್ ಕಾಲೇಜ್ ಲ್ಲಿ "ರಕ್ತವರ್ಣೆ" ಶೋ ಇದೆ, ಅದಕ್ಕೆ ಅಲ್ಲಿಗೆ ಹೋಗಬೇಕು ಅಂತ ಹೇಳಿದ್ರು.ನನಗೆ ಆ ಸಮಯದಲ್ಲಿ ಲ್ಯಾಬ್ ಪ್ರಾಕ್ಟಿಕಲ್ ಪರೀಕ್ಷೆಗಳು ಆರಂಭವಾಗಿತ್ತು.ನಾನೂ ಸಹ ಅದನ್ನೇ ಮಾಮ್ ಹತ್ರ ಹೇಳಿದ್ದೆ,ಆಮೇಲೆ ನನ್ನ ಜಾಗಕ್ಕೆ ಯಾರೂ ಸಿಗದೆ ನಾನು ಹೋಗುವಂತಾಯಿತು. ಅದರಲ್ಲೂ ನನ್ನ ಅಕ್ಕನನ್ನು ಒಪ್ಪಿಸುವುದು ಸುಲಭವಾಗಿರಲಿಲ್ಲ .ಮಾಮ್ ಕಡೆಯಿಂದ ಅಕ್ಕನ ಹತ್ತಿರ ಹೇಳಿಸಿ,ಒಪ್ಪಿಗೆ ಪಡೆದು ಹೊರಟವು.ನನಗೊಂದು ಕಡೆ ಲ್ಯಾಬ್ ಪ್ರಾಕ್ಟಿಕಲ್ ಭಯ,ಇನ್ನೊಂದು ಕಡೆ ಶೋ...., ಅಡಕತ್ತರಿಯ ಪರಿಸ್ಥಿತಿ.ಯಾವುದರಲ್ಲೂ ಮನಸ್ಸನ್ನ ಕೇಂದ್ರೀಕರಿಸಲು ಆಗಲಿಲ್ಲ. ಎಲ್ಲರೂ ಖುಷಿಯಿಂದ ಶೋಗೆ ತಯಾರಾಗುತ್ತಿದ್ದರೆ, ನಾನು ನಮಗೆ ಉಳಿದುಕೊಳ್ಳಲು ಕೊಟ್ಟ ರೂಮಿಂದ ಹೊರಗಡೆ ಸ್ವಲ್ಪ ದೂರದ ಮಾವಿನ ಮರದ ಕೆಳಗೆ ಕುಳಿತು ನನ್ನ ಪ್ರಾಕ್ಟಿಕಲ್ ಎಕ್ಸಾಮ್ ತಯಾರಿ ನಡೆಸುತ್ತಾ ಇದ್ದೆ.ಅಂತೂ ಎರಡು ದಿನದ ಶೋ ಮುಗಿಸಿ ಅಲ್ಲಿಂದ ರಾತ್ರಿಯೇ ಹೊರಟು ಬೆಳಗ್ಗಿನ ಜಾವ ಬೆಂಗಳೂರು ತಲುಪಿದ್ದೆವು.ಹಾಗ್ಗೆ ಕಾಲೇಜಿಗೆ ಹೋಗಿ ಲ್ಯಾಬ್ ಪ್ರಾಕ್ಟಿಕಲ್ ಎಕ್ಸಾಮ್ ಮುಗಿಸಿ ಮನೆಯತ್ತ ಮುಖ ಮಾಡಿದ್ದೆ.ಆದರೆ ಆ ಸಂದರ್ಭವೇ ಮುಂದೆ ನನಗೆ ತುಂಬಾ ಸಹಾಯ ಮಾಡಿದ್ದು.
ಎಂತಹದೇ ಒತ್ತಡದ ಸಂದರ್ಭವಿರಲಿ, ಅದನ್ನು ನಿಭಾಯಿಸುವ ಛಾತಿ ಮೂಡಿಸಿತ್ತು. ಅದಕ್ಕೆ ಕಾರಣ ದೃಶ್ಯ ಎಂದರೆ ತಪ್ಪಿಲ್ಲ. ಶಿಲ್ಪಿಯ ಉಳಿಪೆಟ್ಟು ತಿಂದು ಒಂದು ಮೂರ್ತಿ ಎಷ್ಟು ಅದ್ಭುತವಾಗಿ ಹೊರಹೊಮ್ಮುತ್ತದೆಯೋ, ಅದೇ ರೀತಿ ತಮ್ಮದೇ ಆದ ಅನುಭವಗಳು,ಶಿಸ್ತು, ಏಕಾಗ್ರತೆಗಳನ್ನು ಮೈಗೂಡಿಸಿಕೊಂಡು ಒಂದು ಸುಂದರವಾದ ವ್ಯಕ್ತಿತ್ವವನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದು ದೃಶ್ಯ.

Rachana Hegde has been a part of Dhrushya since 2016 and has been contributing to theatre ever since.
Currently, Rachana Hegde is employed in TCS as a software engineer.
Art by Sammruddhi Gowda. Click here to check out her art
Comments