12th night ನಾಟಕದ rehearsal ದಿನಗಳವು. ನನಗದು ಮೊದಲ ನಾಟಕ ಮತ್ತು ಮೊದಲ ಅನುಭವವಾದ್ದರಿಂದ ಸೆಟ್-ಪ್ರಾಪರ್ಟಿ ಕುರಿತಾಗಿ ಹೆಚ್ಚು ಜವಾಬ್ದಾರಿ ಇರಲಿಲ್ಲ. ಇದ್ದ ಒಂದೇ ತಲೆಬಿಸಿ ಎಂದರೆ ನನ್ನ ಪಾತ್ರ ಮತ್ತು ಒಲೀವಿಯಾ ಆಗಿ ನಾನು ಧರಿಸುವ ಉಂಗುರದ ಸಂರಕ್ಷಣೆಯ ಹೊಣೆ.
ದೃಶ್ಯದಲ್ಲಿ ಒಂದು ಶಿಸ್ತಿದೆ. ಎಲ್ಲರೂ ಒಟ್ಟಿಗೇ ಹೋಗಿ ನಮ್ಮ ನಮ್ಮ ಸೆಟ್- ಪ್ರಾಪರ್ಟಿ, ಸೆಟ್ ರೂಂ ನಿಂದ ಹೊತ್ತು ತರುತ್ತಿದ್ದೆವು. ಹಾಗೆ ರೆಹೆರ್ಸಲ್ ಮುಗಿಸಿ ಒಟ್ಟಿಗೆ ವಾಪಾಸು ಸೆಟ್ ರೂಂ ನಲ್ಲಿ ಜೋಪಾನವಾಗಿ ಜೋಡಿಸಿ ಬರಲಾಗುತ್ತಿತ್ತು. ಉಂಗುರ ಚಿಕ್ಕ ವಸ್ತು ಎಂದೆನಿಸಿದರು ನನಗದು ನಿದ್ದೆ ಕೆಡಿಸಿದ ವಿಶಯ. ನಾವು ಪ್ರಾಪರ್ಟಿ ಇಡುತ್ತಿದ್ದ ಕೋಣೆಯ ಒಂದು ಖಾಯಂ ಜಾಗದಲ್ಲಿ ಇದನ್ನು ಯಾರಿಗೂ ಕಾಣದಂತೆ ಜೋಪಾನವಾಗಿ ಇಡುವ ಒಂದು ಮೂಲೆ ಹುಡುಕಿದ್ದೆ. ಯಾವಾಗಲೂ ಅಲ್ಲೇ ಜೋಪಾನವಾಗಿ ಇಡುತ್ತಿದ್ದೆನಾದರೂ, ನಿದ್ದೆ ಮಾಡುವಾಗ, ಬಸ್ಸಿನಲ್ಲಿ ಕೂತಾಗ, ಎಲ್ಲೆಂದರಲ್ಲಿ ಧಿಡೀರನೆ 'ಉಂಗುರ' ನೆನಪಾಗಿಡುತ್ತಿತ್ತು "ಅಯ್ಯೋ..! ಸರಿಯಾಗಿ ಇಟ್ಟಿದಿನೋ... ಇಲ್ವೋ, ಏನಾದರೂ ತಾಗಿ ಅದು ಎಲ್ಲಾದರೂ ಆಚೆಈಚೆ ಆದರೆ" ಹೀಗೆ ಏನೇನೋ ಚಡಪಡಿಕೆ. ಮಾರನೆಯ ದಿನ ಮತ್ತೆ ರಿಹರ್ಸಲ್ ಗೆ ಬಂದು ಸೆಟ್ ರೂಮ್ ಗೆ ಹೋಗುವ ವರೆಗೂ ನನಗೆ ಸಮಾಧಾನವಿರುತ್ತಿರಲಿಲ್ಲ.
"ಪ್ರತೀ ವಸ್ತುವಿಗೂ ಅದರದ್ದೇ ಸ್ಥಾನವಿದೆ, ನಾವು ಉಪಯೋಗಿಸುವ ಎಲ್ಲ ಪರಿಕರಗಳನ್ನೂ ಪ್ರೀತಿಯಿಂದ ಕಾಪಾಡಿಕೊಳ್ಳುತ್ತಾ ಮುಂದಿನವರಿಗೆ ಹಸ್ತಾಂತರವಾಗುವಾಗಲೂ ಆ ವಸ್ತುಗಳು ಒಳ್ಳೆಯ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು" ಇದು ದೃಶ್ಯ ನನಗೆ ಕಲಿಸಿದ ಸತ್ಯ. ಇಂದಿಗೂ ಚಿಕ್ಕ ಪುಟ್ಟ ವಸ್ತುಗಳನ್ನು ಸುರಕ್ಷಿತವಾಗಿ ಇಡುವಾಗ ಆ "ಉಂಗುರ"ದ ನೆನಪಾಗುತ್ತದೆ.
Vibha Dongre has been a part of the Dhrushya Family since 2015 and has been actively contributing to theatre in various capacities ever since.
she is currently working as a lecturer in journalism @Kateel Ashok Pai Memorial College, Shivamogga.
Comments